...

9 views

ಗಜಲ್
ಕಳೆದುಕೊಳ್ಳುವ ಆತಂಕವು ಆವರಿಸುವಷ್ಟು ಪ್ರೀತಿಸದಿರು ನನ್ನ
ಅತ್ಯಂತ ಮೋಹಪರವಶತೆ ಆಕ್ರಮಿಸುವಷ್ಟು ಪ್ರೀತಿಸದಿರು ನನ್ನ

ನನ್ನ ಸಹಜ ಗುಣ ನಿಸರ್ಗದ ಸಂಗ ಮೈಮರೆತು ನಡೆಯುವುದು
ಪರಪಂಚವ ಮರೆತು ನಿನ್ನೇ ಆರಾದಿಸುವಷ್ಟು ಪ್ರೀತಿಸದಿರು ನನ್ನ

ನಿನ್ನದೇ ನೆನಪುಗಳ ಜೊತೆ ಕ್ಷಣ ಕ್ಷಣವೂ ಜೀವಿಸುವ ಬಯಕೆ
ಸುಖವಲ್ಲದ ಏಕಾಂತವನು ಆಸ್ವಾದಿಸುವಷ್ಟು ಪ್ರೀತಿಸದಿರು ನನ್ನ

ಸಂತಸದ ನೆಮ್ಮದಿ ಮನದಾಳದಲ್ಲಿ ಚಿಗುರಿ ಮೊಳಕೆಯೊಡೆದಿದೆ
ಮಳೆಬಿಲ್ಲು ಕೈಲಿದೆಯೆಂದು ಆಭಾಸಿಸುವಷ್ಟು ಪ್ರೀತಿಸದಿರು ನನ್ನ

ಅರಳಿದ ಮಲ್ಲಿಗೆಯ ಸುಮ ಕಾದಿದೆ ದುಂಬಿಯ ಪರಾಗಸ್ಪರ್ಶಕೆ
ಅಕ್ಕರೆ ಇಚ್ಛಿಸಿ ನೋವನ್ನು ಆಹ್ವಾನಿಸುವಷ್ಟು ಪ್ರೀತಿಸದಿರು ನನ್ನ