...

2 views

ಕಾಳು
ಭಾವ ವರ್ಷ

ಬಿಂದು ೯

ಕಾಳು

ತೂರಾಚೆಗೆ ಅಸಹಿಷ್ಣುತೆಯ ಜೊಳ್ಳು
ತಿಳಿ ಈ ಜಗವೆಲ್ಲ ನಶ್ವರ ಬರೀ ಪೊಳ್ಳು
ಅಂತಸ್ಸತ್ವವಿರದೆ ತೋರಿಕೆಯ ಸುಳ್ಳು ॥೧॥

ಮೂರು ದಿನಗಳ ನಾಟಕ ಬರೀ ಜಾಳು
ನೆಮ್ಮದಿ ಶಾಂತಿ ಇರದೆ ಪೂರಾ ಗೋಳು
ಸೋಮಾರಿತನದಲಿ ಬೀಳದಿರಲಿ ಪಾಳು ॥೨॥

ಲಾಲಸೆಯ ನೀಚ ರಾಸುಗಳಲ್ಲಿ ನುಗ್ಗದಿರಲಿ
ಸಾಧನೆಯ ಹಮ್ಮಿನಲಿ ಮನ ಬೀಗದಿರಲಿ
ಸುಲಭ ಮಿಥ್ಯಗಮ್ಯದೆಡೆಗೆ ಪಥ ಸಾಗದಿರಲಿ॥೩॥

ಬದುಕೆಂಬ ಹೊಲದಲಿ ಬೆಳೆ ಸನ್ಮಾರ್ಗದ ಬೆಳೆ
ಸಂಶಯದ ಕಳೆ ಕಿತ್ತು ಪಡೆ ಸಫಲತೆಯ ಕಳೆ
ಸಂತೃಪ್ತಿಯ ಹೊನಲಲಿ ಸಂಭ್ರಮದ ಹೊಳೆ॥೪॥

ಅಸಹಕಾರದಲಿ ಮನಗಳಾಗದಿರಲಿ ಹೋಳು
ಬಿತ್ತಿದಂತೆ ಬೀಜ ಬೆಳೆದಂತೆಯೇ ತಾನೇ ಕಾಳು
ಧ್ಯಾನಜ್ಞಾನ ಸಮಗ್ರತೆಯಲಿ ತುಂಬಿರಲಿ ಬಾಳು॥೫॥

ಮೆಲ್ಲಡಿ ಇಡಬಹುದು ಚಂಚಲತೆಯ ಕಳ್ಳ
ತುಂಬಬಹುದು ನೋವು ಸಂಕಟಗಳ ಬಳ್ಳ
ಆದರೂ ನೀನಾಗದಿರು ನಯವಂಚಕ ಮಳ್ಳ॥೬॥

ಹೊಂದಿ ಬಾಳುವ ಸಹನೆ ಕಲೆಯ ನೀನರಿ
ಹೊಡೆದೋಡಿಸು ಅಹಂ ಎಂಬ ಆ ಮಾರಿ
ಸವಿಗಾನ ಮಿಡಿವುದಾಗ ಜೀವನ ತಂಬೂರಿ॥೭॥

ಸುಜಾತಾ ರವೀಶ್
ಮೈಸೂರು
೧೯.೧೧.೨೦೨೨