...

6 views

ಕವಿತೆ : ನಿತ್ಯಚೈತನ್ಯದ ಭಾಗ್ಯ..
ಕವಿತೆ : ನಿತ್ಯಚೈತನ್ಯದ ಭಾಗ್ಯ..

ನೀಲಿಮೋಡದ ಮರೆಯಲ್ಲಿ
ಇಣುಕುತ ನಿಂತ ಸೂರ್ಯ
ಅವನಿಯ ಮೈಕಳೆಗೆ
ಸೂರೆಗೊಂಡ ಧೀರ..

ಹರಿಯುವ ನದಿಯನ್ನೇ
ಸೀರೆಯಾಗಿಸಿ
ತುರುಬಿಗೆ ಬಗೆಬಗೆಯ
ಸುಮಗಳೇರಿಸಿ

ಅರಸಿನ ಕುಂಕುಮಕೆ
ಅಲ್ಲಿ ಇಲ್ಲಿ ಏಕೆ‌ ಹುಡುಕುವೆ?!
ಲಾವಣ್ಯ ವೃದ್ಧಿಸಲು
ಸಖಿಯರು ಜೊತೆಗಿಲ್ಲವೇ..

ಮುಂಜಾನೆಯ ಕಿರಣಗಳಿಂ
ಹೆಚ್ಚಿದ ಮುಖದ ಕಾಂತಿ
ಗುಳಿಕೆನ್ನೆಯಲ್ಲಿ ಕೊಂಚ ‌ಸಿಗ್ಗು
ಇಬ್ಬನಿಯಲ್ಲಿ ತೋಯಿಸಿದ ರೀತಿ..

ಬಂದ‌ನಮ್ಮ ರವಿರಾಜ
ಸ್ವರ್ಣ ರಥವನೇರಿ
ಕಾಲ್ಗೆಜ್ಜೆ , ಕೈಬಳೆಯ
ತೊಡಿಸಲು ಸಖಿ ಧರಿತ್ರಿಗೆ

ಒಂದೇ ಒಂದು ಮಹದಾಸೆ
ಭೇಟಿಯಾಗಿಬೇಕೆಂದು..
ದೂರದಲ್ಲೇ ನಿಂತರೂನು
ಸಖ್ಯಕ್ಕಿಲ್ಲ‌ ಕುಂದು..

ಮುಸ್ಸಂಜೆ ಕೈಜಾರಿದಾಗಲೇ
ಬೇಸರ, ಭೂರಮೆಗೆ
ಮತ್ತೆ ಮರಳಿ ಬಂದೆ ಬರುವ
ಅವನು ದಿನಕರನಲ್ಲವೇ..

ಸಿಂಧು ಭಾರ್ಗವ ,ಬೆಂಗಳೂರು
_________________()__
© Writer Sindhu Bhargava