...

3 views

ಪಾರಿಜಾತ ಹೂವು
ತಂದೆಮನೆ ಪಾರಿಜಾತ..

ಅಪ್ಪಯ್ಯ ಚಿಕ್ಕವರಿದ್ದ‌ ಪೂರ್ವದಲ್ಲೇ ಇದ್ದ
ಪಾರಿಜಾತದ ಗಿಡ ವರ್ಷಪೂರ್ತಿ
ಹೂವರಳಿಸಿಕೊಂಡು ಖುಷಿಕೊಡುತ್ತಿತ್ತು.

ಅದರ ಗೆಲ್ಲು ಕಡಿದು ಬೇರೆಡೆ ನೆಟ್ಟಾಗ
ಅಪ್ಪಯ್ಯ ನೆಟ್ಟ ಪಾರಿಜಾತವಾಯ್ತು..
ಹೌದು,
ಅಪ್ಪಯ್ಯ ನೆಟ್ಟ ಪಾರಿಜಾತ,
ಅಮ್ಮ ಮದುವೆಯಾಗಿ ಬರುವ ಮೊದಲೇ ಬೇರೂರಿತ್ತು..

ಅಮ್ಮನು ಪ್ರತಿ ಸಂಜೆ
ಹೂಬುಟ್ಟಿ ತುಂಬಾ ಮೊಗ್ಗು ತಂದು
ನೇಯ್ದು ತುಳಸಿ ಕಟ್ಟೆಗೊಂದು
ದೇವರ ಫೋಟೋಗೆ ಮಾಲೆ ಹಾಕುತ್ತಿದ್ದರು..

ಅದನ್ನು ಬಿಡಿ ಹೂವಾಗಿ ಅರ್ಚನೆ
ಮಾಡಲು ಬಳಸುತ್ತಿದ್ದರು..
ನಾವು ಹುಟ್ಟಿದ ಮೇಲಂತು ಆ ಕೆಲಸ
ನಮ್ಮ‌ ಪಾಲಿಗೆ ಬಹಳ ಖುಷಿಯಿಂದಲೇ ಮಾಡುತ್ತಿದ್ದೆವು..
ಅಮ್ಮನೂ ಒಂದು ಗೆಲ್ಲು ಕಡಿದು ರಸ್ತೆ ಎದುರಿಗಿನ ಗೇಟಿನ ಬಳಿ ನೆಟ್ಟಿದ್ದಳು..

ಈಗ ಮದುವೆಯಾಗಿ ನಾವು ಗಂಡನ ಮನೆಗೆ ಹೋಗಿಯಾಗಿದೆ..
ಆಗಾಗ್ಗೆ ಅಪ್ಪಯ್ಯನ ಮನೆಗೆ ಬಂದರೆ
ಈ ಪಾರಿಜಾತದ ಘಮ, ಅದರೊಂದಿಗಿನ
ಬಾಲ್ಯದ ನೆನಪು ಮುದನೀಡುತ್ತದೆ..

ಮುಂಜಾನೆ ನೆಲದಲ್ಲಿ ಬಿದ್ದರೂ ತನ್ನ ಕೋಮಲ ಪಕಳೆಗಳಿಂದ ಸೂಕ್ಷ್ಮತೆ ಜೀವಾಳವಾಗಿದೆ.
ಸೂರ್ಯನ ಶಾಕ ತಡೆಯಲಾಗದೆಂದೇನೋ
ಸಂಜೆ ಅರಳಿ ಮುಂಜಾನೆಯೇ ತೊಟ್ಟು ಕಳಚಿ ಬೀಳುತ್ತದೆ.

ಅಪ್ಪಯ್ಯನ ಮನೆ ಪಾರಿಜಾತದ ಸಂತತಿ ಬೆಳೆಯುತ್ತಲೇ ಇರಲಿ. ಅದರ ಘಮವು ಹರಡುತ್ತಲೇ‌ ಇರಲಿ.

© Writer Sindhu Bhargava