...

9 views

ಅಧಿಕಾರ
ಅನವರತ ಅಕ್ಷಮ್ಯ ಅಧಿಕಾರದ ಅಮಲು,
ಅಪರಿಮಿತ ಅಪಾರ ಅನುಭವಿಸಿದವರ ಅಳಲು!

ಅಮರ ಅಧಿಕಾರಶಾಹಿಯ ಅಧಿಪತ್ಯಗಳ,
ಅಡೆತಡೆಯ ಅಡ್ಡಗೋಡೆಗಳು ಅವಶೇಷಗಳಿಂದು.
ಅಪರೂಪದ ಅತಿಶ್ರೇಷ್ಠ ಅಧಿಕಾರಿಗಳು,
ಅಳಿದಿಹರು ಅವಿನೀತಿಯ ಅತಿಕ್ರಮಣದಿಂದ.

ಅವಲೋಕಿಸೆ ಅನಾದಿಕಾಲದಿಂದಲೂ ಅನರ್ಥವೇ.
ಅನಾಯಾಸ ಅರಸುಪಟ್ಟ, ಅನುವಂಶಿಕ ಅಧಿಪತ್ಯ.
ಅಮರತ್ವದ ಅಚಲ ಅಡಿಪಾಯವಿದೆಯೇನೋ,
ಅನಂತ ಅಧಿಕಾರಶಾಹಿಗೆ, ಅಳಿವಿಲ್ಲವೇನೋ?

ಅಪ್ರಮಾಣಿಕತೆಯ ಅಡಿಪಾಯ ಅನೂಹ್ಯ ಅಭೇಧ್ಯ,
ಅವ್ಯವಹಾರಗಳು ಅನೀತಿಗಳೇ ಅರ್ಚನೆಗಳು.
ಅನಾಥರ ಅಳಲು ಅರ್ಥವಿಹೀನ ಅಕ್ಷರಮಾಲೆಗಳು,
ಅಳಿಯುವುದೆಂದೋ ಅರಿಯೆಯೀ ಅರಾಜಕತೆಗಳು!
© ಕೃಷ್ಣಕವಿ
#ಕೃಷ್ಣಕವಿ #ಏಕಾಕ್ಷರ_ಕವನ #ಅಧಿಕಾರ