...

5 views

ನೀ ಯಾಕೆ ಶಿವ ಹೀಗೇ..?
ನೀ ಯಾಕೆ
ಶಿವ ಹೀಗೆ?


ಯಾಕೋ ತವರಿಗೆ ಹೋಗಲು ಮನಸ್ಸು ಬರುತ್ತಿಲ್ಲ.ಮೊದಲ ಬಾರಿಗೆ ಅಮ್ಮನಿಲ್ಲದ ತವರಿಗೆ ಹೋಗುತ್ತಿರುವೆ.ದೇವರಿಲ್ಲದ
ಗುಡಿಯಂತೆ ನನ್ನ ತವರು.ತುಂಬಾ ಅಳಬೇಕು ಅನ್ನಿಸುತ್ತಿದೆ.
ಮೊದಲೆಲ್ಲ ಅಮ್ಮ ಇರುವಾಗ ತವರಿಗೆ ಹೋಗುವುದೆಂದರೆ
ಎಷ್ಟೊಂದು ಖುಷಿ, ಸಂಭ್ರಮ.. ಇರುತ್ತಿತ್ತು.. ಅದರಲ್ಲೂ ಮಗ
ನೀ ಬರುವೆ ಎಂದು ಅತ್ರಾಸ ಮಾಡಿರುವೆ .ಕೋಡುಬೇಳೆ ಮಾಡಿ ಇಟ್ಟಿರುವೆ ..ಅಂತ ಅಮ್ಮ ಹೇಳುತ್ತಿದ್ದಾಗೆಲ್ಲ ಚಿಕ್ಕ ಮಕ್ಕಳಂತೆ ಕುಣಿದು ಕುಪ್ಪಳಿಸಿಬಿಡುತ್ತಿದ್ದೆ‌.

ಇತ್ತ ಪತಿದೇವರ ಬಿಟ್ಟು ತವರಿಗೆ ಹೋಗಬೇಕಲ್ಲ ಎಂಬ ನೋವಿದ್ದರೂ ಮನದಲ್ಲಿ ,ಅಮ್ಮನ ಮಡಿಲು ಸೆಳೆದುಬಿಡುತ್ತಿತ್ತು...ಒಂದೆರಡು ದಿನ ಇದ್ದು ,ಅಮ್ಮ ಮಾಡಿದ
ತರತರಹದ ತಿಂಡಿ ತಿನ್ನುವುದೇ ಒಂದು ತರಹದ ಖುಷಿ. ಅಮ್ಮನಿಗೂ ಚೂರು ಕೆಲಸ ಮಾಡಿಕೊಟ್ಟು ,ಅಪ್ಪನ ಜೊತೆ ಕೂತು ಎಲೆ ಅಡಿಕೆ ಜಗಿಯುತ್ತಾ ಸುದ್ದಿ ಹೇಳುವ ಸೊಬಗೇ
ಅತ್ಯಾನಂದ...ಕಷ್ಟ, ಸುಖ,ಹಂಚಿ ಆ ಮಮತೆಯಲ್ಲಿ ಕಳೆದುಹೋಗುವ ಆನಂದ ಸ್ವರ್ಗಕ್ಕಿಂತ ಮಿಗಿಲು.

ಅಮ್ಮ ಇದ್ದಾಗ ಪ್ರತೀ ದಿನ ಸಂಜೆ ಪೋನ್ ಮಾಡಿ ಅಪ್ಪ, ಅಮ್ಮನ ವಿಚಾರಿಸಿಕೊಳ್ಳುತ್ತಿದ್ದೆ..
ಇನ್ನೆಲ್ಲಿಯ ಈ ಆನಂದ ನನ್ನ ಬಾಳಲ್ಲಿ.ಅಮ್ಮ ನಮ್ಮನೆಲ್ಲ ಬಿಟ್ಟು ಸ್ವರ್ಗವಾಸಿಯಾದ ಮೇಲೆ...ಈಗಲೂ ಅಮ್ಮನ ಬಳಿ ಮಾತನಾಡಬೇಕೆಂಬ ಹಂಬಲದಲ್ಲಿ ಪೋನು ಮಾಡುತ್ತೇನೆ.ಪೋನ್ ರಿಂಗ್ ಆದ ಕೂಡಲೇ ಖುಷಿ ಆಗುತ್ತೆ.ಅಮ್ಮ ಹಲೋ ಅಂತಾಳೆ‌, ಹೇಗಿದೀಯಾ ಮಗಳೇ ಅಂತಾಳೆ ಎಂದು..ಅಮ್ಮನ ಬದಲಿಗೆ ನೀವು ಪೋನ್ ಮಾಡಿದ ಚಂದಾದಾರರು ಅನ್ನುವ ಕಂಪ್ಯೂಟರ್ ಧ್ವನಿಗೆ ಎಚ್ಚೆತ್ತಕೊಳ್ಳುತ್ತೇನೆ..ವಾಸ್ತವಕೆ ಮರಳುತ್ತೇನೆ.ದುಃಖದ ಕಟ್ಟೆ ಒಡೆಯುತ್ತೆ...ಎಲ್ಲ ನೆನಪಾಗಿ ಕಣ್ಣ ಹನಿ ಜಾರಿ ಕೆನ್ನೆ ಒದ್ದೆಯಾಯಿತು....ಅಮ್ಮ ಮಾಡಿದ ಚಟ್ನಿ ಪುಡಿ...ಕನಿಕರದಿಂದ ನನ್ನ ನೋಡಿದಂತಾಯಿತು. ..ನನಗೆ ಚಟ್ನಿ ಪುಡಿಯೆಂದರೆ ತುಂಬಾ ಪ್ರೀತಿ ಅಂತ ,
ಅಮ್ಮ ಖಾಯಿಲೆ ಬಿದ್ದಾಗಲೂ ಊರಿಗೆ ಹೋದಾಗ ಮಾಡಿ
ತಂದಿದ್ದಳು...ಅವಳು ಇರುವವರೆಗೆ ಖುಷಿಯಿಂದ ತಿಂದೆ.ಅಮ್ಮ ಹೋದಮೇಲೆ ಅವಳ ನೆನಪಿಗೋಸ್ಕರ ಪ್ರಿಜ್ ಲ್ಲಿ ಸೇಫಾಗಿ ಇಟ್ಟುಕೊಂಡಿದೀನಿ...ಯಾರಿಗೂ ತಿನ್ನಲು ಕೊಡದೇ.
ಚಟ್ನಿ ಪುಡಿಯನ್ನೇ ಅಮ್ಮ ಎಂದು ತಿಳಿದು ಬಿಡುತ್ತೆ ಒಮ್ಮೊಮ್ಮೆ ಈ ಹುಚ್ಚು ಮನಸ್ಸು.ಪುಟ್ಟ ಮಕ್ಕಳು ಅಮ್ಮನ ಮಡಿಲಲ್ಲಿ ಮಲಗಿ ಆಡುವುದನ್ನು ನೋಡಿದಾಗ ,ನಾನೂ ಒಬ್ಬ ತಾಯಿ ಎಂಬುದನ್ನು ಮರೆತು ಹಂಬಲಿಸುತ್ತೇನೆ ಅಮ್ಮನ ಮಡಿಲನ್ನು.

ಇದ್ದಕ್ಕಿದ್ದಂತೆ ಹೊರಗಡೆ ತುಂಬಾ ಗಲಾಟೆ ಕೇಳಿಸುತ್ತಿತ್ತು..ನನ್ನ ಯೋಚನೆಯನ್ನು ಬಿಟ್ಟು ಹೊರಗಡೆ ಬಂದು ನೋಡಿದೆ.ಎದುರುಗಡೆ ಮನೆಯ ಶ್ಯಾಮಲ ಅವಳ ತಾಯಿಯನ್ನು ಥಳಿಸುತ್ತಿದ್ದಳು..ವಯಸ್ಸಾದ ತಾಯಿ.ಇವಳು ಕೆಲಸಕ್ಕೆ ಹೋಗುವವಳು..ಮಗ,ಸೊಸೆ , ಮಗಳಮನೆಗೆ ಸಾಗು ಹಾಕಿದ್ದರು ತಾಯಿಯನ್ನು. ಬಿದ್ದು ಸೊಂಟ ಮುರಿದುಕೊಂಡ ಆ ತಾಯಿ
ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಏಳಲಾಗದೇ
ಹಾಸಿಗೆಯಲ್ಲಿ ಮೂತ್ರ ಮಾಡಿಕೊಂಡುಬಿಟ್ಟಿದ್ದಳು.ಅದಕ್ಕೆ ಮಗಳು ಕೋಪದಲ್ಲಿ ತಾಯಿಗೆ ಹೊಡೆದು ಬಡಿದು ಮಾಡುತ್ತಿರೋದು‌..ನನಗೆ ಆ ದೃಶ್ಯ ನೋಡಲಾಗಲಿಲ್ಲ.ದುಃಖ ಉಮ್ಮಳಿಸಿ ಬಂತು.ಮಗ ಶಾಲೆಯಿಂದ ಬಂದಿರುವುದೂ ಅರಿವಿಗೆ ಬರಲಿಲ್ಲ. ನನ್ನ ನೋಡಿ ಅಮ್ಮ ಅಳುತ್ತಿರುವೆಯಾ ಅಂದ.ಒಮ್ಮೆ ಎದುರುಗಡೆ ಮನೆಯನ್ನು ದಿಟ್ಟಿಸಿ ನೋಡಿದ.
ಅಮ್ಮ ,ಅಜ್ಜಿಯನ್ನು ತುಂಬಾ ಮಿಸ್ ಮಾಡಿಕೊಳ್ತಿದೀಯಾ ಅಂತ ನನ್ನ ತಲೆ ನೇವರಿಸಿದ.ಪ್ರೆಶ್ ಆಗ್ತೀನಿ ಅಮ್ಮ ಅಂತ ಹೋದ ಒಳಗೆ.

ಅಮ್ಮ ಬಾ ಇಲ್ಲಿ ಎಂಬ ಮಗನ ಕೂಗಿಗೆ ಒಳಗೆ ಹೋದೆ.ನನ್ನ ಕೈ ಹಿಡಿದು ಡೈನಿಂಗ್ ಟೇಬಲ್ ಮೇಲೆ ಕೂರಿಸಿದ.ಮೊಸರನ್ನ
ತುಂಬಿದ ತಟ್ಟೆ ಹಿಡಿದು ಅಮ್ಮ ನನ್ನ ಕಣ್ಣು ನೋಡು ಅಂದ.ಇಲ್ಲಿ ಅಜ್ಜಿ ಇದಾಳೆ ಅಂದ.ಆ ಅನ್ನು ಅಮ್ಮ ಅಂತ ಒಂದು ತುತ್ತು ಮೊಸರನ್ನ ಬಾಯಿಗಿಟ್ಟ ಮಗ.‌.ನನಗೆ ತಡೆಯಲಾಗಲಿಲ್ಲ.... ಬರಸೆಳೆದು ತಬ್ಬಿಕೊಂಡೆ ಮಗನನ್ನು. ಅಮ್ಮ ಅಳಬೇಡ .ನೀನು ಅಜ್ಜಿ ಇರುವವರೆಗೂ ಚೆನ್ನಾಗಿ ನೋಡಿಕೊಂಡಿರುವೆ.ಅಜ್ಜಿ ಕೊನೆಯವರೆಗೂ ತುಂಬಾ ಖುಷಿಯಿಂದ ಇದ್ದರು...ನಿನ್ನಂತ ಮಗಳು ಸಿಕ್ಕಿದ್ದು ಅವರ ಅದೃಷ್ಟ ಅಮ್ಮ ಅಂದ ಮಗನನ್ನೇ ತದೇಕ ಚಿತ್ತದಿಂದ ,ಆಶ್ಚರ್ಯದಿಂದ ನೋಡಿದೆ...
ನನ್ನ ಮಗನಲ್ಲಿ ಎಷ್ಟು ಪ್ರಬುದ್ಧತೆ ಇದೆ ಎಂದು.

ಅಮ್ಮ ಅಜ್ಜಿ ನಮ್ಮ ಒಳಗೇ ಇದಾರೆ.ಎಲ್ಲೂ ಹೋಗಿಲ್ಲ. ನನ್ನಲ್ಲಿ, ನಿನ್ನಲ್ಲಿ, ಪಪ್ಪನಲ್ಲಿ ಎಲ್ಲಾ ಅಂದ ಮಗನ ಧ್ವನಿಗೆ ಆಗಷ್ಟೆ ಕೆಲಸದಿಂದ ಹಿಂತಿರುಗಿ ಬಂದ ನನ್ನವರೂ ಹೌದು ಸುಮತಿ, ದುಃಖಿಸಬೇಡ ಎಂದು ಧ್ವನಿ ಸೇರಿಸಿದರು.ಮನಸ್ಸು ಚೂರು ಶಾಂತವಾದರೂ ..ಕಳೆದು ಕೊಂಡ ತಾಯ್ಮಡಿಲು ಮರೆಯಲಾದೀತೆ?ಮನಸ್ಸು ನೋವಿನಕಡಲಾದಾಗ ಅಮ್ಮನ ಮಡಿಲೊಳಗೆ ಮಲಗಿ ದುಃಖ ಮರೆಯುವ ಆ ಅಮೃತ ಕ್ಷಣ ನನ್ನ ಪಾಲಿಗೆ ಇನ್ನು ನಿಲುಕದ ನಕ್ಷತ್ರ....ಎದುರುಗಡೆಯ ಆ ತಾಯಿಯ ನೋಡಿ ನನಗೆ ಅನಿಸಿತು.ಬೇಕೆನಿಸಿದರೂ ಉಳಿಸುವುದಿಲ್ಲ..ಬೇಡೆಂದಲ್ಲಿ ದಯ ಪಾಲಿಸುವೆ..#ನೀ #ಯಾಕೆ #ಶಿವ #ಹೀಗೆ...ಎಂದು..
....‌.......ಪೂರ್ವ ವಾಹಿನಿ.........
(ಒಡಲ ಪ್ರೀತಿ ನಾ ಬರೆದ ಕಥಾಸಂಕಲನದಿಂದ ಆಯ್ದ ಕಥೆ)