...

5 views

ಮಲ್ಲಿಗೆ ಮುಡಿದವಳೇ
ಭಾವ ವರ್ಷ

ಬಿಂದು ‍೧೦

ಮಲ್ಲಿಗೆ ಮುಡಿದವಳೆ ಮನವ ಗೆದ್ದವಳೆ

ಮನೆಯ ಅಂಗಳದೆ ಹೂವಾಗಿ ನಗುವವಳೆ
ಹೃದಯ ದೇಗುಲದ ದೇವತೆಯೂ ಇವಳೇ॥ಪ॥
ಮಲ್ಲಿಗೆ ಮುಡಿದವಳೆ ಮನವ ಗೆದ್ದವಳೆ
ಮೆಲ್ಲಗೆ ನಡೆವವಳೆ ಒಲವ ತಂದವಳೆ ॥ಅ.ಪ॥

ಬಾಳೆಂಬ ಆಗಸದೆ ಮಿನುಗೋ ನಕ್ಷತ್ರ
ಆವರಿಸಿ ಕವಿದ ಮೋಹವೋ ವಿಚಿತ್ರ
ಬದುಕಿನ ಕಾದಂಬರಿಯ ನಾಯಕಿ ಪಾತ್ರ ಜೀವನದ ಗಾಳಿಪಟ ಆಡಿಸೋ ಸೂತ್ರ ॥೧॥

ಜೊತೆಯಿರೆ ಸವಿದಂತೆ ಮಧುರ ಜೇನು
ದೂರಾಗೆ ವಿರಹವನು ಸಹಿಸೆನು ನಾನು
ಅಗಲಿಕೆಯ ಬೇಗುದಿಗೆ ನೀರಿರದ ಮೀನು
ನಿಷ್ಕಪಟ ಪ್ರೇಮಕಿನ್ನೊಂದು ಹೆಸರೇ ನೀನು॥೨॥

ಯಾನದಲಿ ಜೋಡಿಯಾದ ಸ್ನೇಹದ ಸಂಗಾತಿ
ಕಲಿಸಿರುವೆ ನಿಸ್ವಾರ್ಥ ಸಾಂಗತ್ಯ ಅನುಭೂತಿ
ಕಂಟಕದ ಕತ್ತಲಿನಲ್ಲಿ ಬೆಳಗಿ ಪ್ರೀತಿ ಜ್ಯೋತಿ
ಹರಿಸಿರಲಿ ಬೆಳಕ ತೊಲಗಿಸೆಲ್ಲ ಭಯಭೀತಿ ॥೩॥

ಸುಜಾತಾ ರವೀಶ್
ಮೈಸೂರು
೨೦.೧೧.೨೦೨೨