...

5 views

ನೋವಿನ ಹಾಡು
ಯಾರೋ ನೀಡಿದ ನೋವಿನ ಹಾಡಿಗೆ
ನನ್ನನ್ನು ಮುನ್ನುಡಿಯಾಗಿ ನುಡಿಸಿದೆ
ನೋವಿನ ನೀರಲಿ ಮುಳುಗಿಸಿ ತೇಲಿಸಿ
ಸಹಿಸಲಾಗದ ವೇದನೆಯಾ ನೀ ನೀಡಿದೆ

ಪ್ರೀತಿಯ ಬಯಸಿ ಬಂದೆ ನಿನ್ನ ಬಳಿಗೆ
ತಿರಸ್ಕಾರಕೆ ತುತ್ತಾದೆ ನಿನ್ನ ಕಡೆಗಣ್ಣಿಗೆ
ಮುಳುಗುತ್ತಿರುವಾಗ ನೀ ನನಗಾಸರೆಯೆಂದುಕೊಂಡೆ
ನಿನ್ನೀ ತಿರಸ್ಕಾರ ಉಸಿರುಗಟ್ಟಿಸಿ ಕೊಂದಿದೆ

ಹೆಣ್ಣು ನಾನೆಂಬ ಕನಿಕರ ನಿನಗಿಲ್ಲ
ಕಣ್ಣಾಗುವೆನೆಂಬ ಹಂಬಲ ನಿನ್ನೊಳಗಿಲ್ಲ
ಒಲವಿನ ತೋಳಬಂದಿ ತೊಡಿಸು ಎಂದೆ
ಕೊರಳಿಗೆ ಕುಣಿಕೆ ಬಿಗಿದು ಕ್ರೌರ್ಯ ಮೆರೆದೆ

ನಿನ್ನ ಪ್ರೀತಿ ಬೇಡಿ ಬಂದೆ ಅಂದು
ಆ ಪ್ರೀತಿಗಾಗಿ ಸೆರೆಗೊಡ್ಡುವೆ ಇಂದು
ಗಂಡೆಂಬ ಅಹಂಕಾರ ಬಿಟ್ಟು ನೋಡು
ಸುಖ ಸಂಸಾರವಾಗುವುದು ನಮ್ಮೀ ಗೂಡು

ದೂರಿದರು ಪರವಾಗಿಲ್ಲ ದೂರವಿಡದಿರು
ಭಾರವಾಗಲಾರೆ ನಿನಗೆ ಬಂದೆನ್ನ ಸೇರು
ಹೃದಯ ಹೃದಯಗಳ ಬೆಸೆಯಲ್ಲಿ ಪ್ರೇಮ
ಪ್ರೀತಿಯ ಮಳೆಬಿಲ್ಲು ತರಲಿ ನಮ್ಮ ಸಂಗಮ

೦೬೨೨ಪಿಎಂ೦೧ ೦೫ ೨೦೨೪
*ಅಮು ಭಾವಜೀವಿ ಮುಸ್ಟೂರು*
© All Rights Reserved