...

5 views

ಕಲೆಯ ಕೌಮುದಿ
ಕೊನರಿದೆ ಕಲ್ಲಿನಲಿ ಕಲ್ಪನೆಯ ಕುಸುರಿ,
ಕಂಡು ಕೇಳದ ಕುಸುಮ ಕಾವ್ಯಲಹರಿ!

ಕಲ್ಲರಳಿ ಕುಸುಮವೋ? ಕಲೆಯ ಕೌಮುದಿಯೋ?
ಕಮನೀಯ ಕಾಂತಿಯ ಕೌಸ್ತುಭವೋ?
ಕರಣಗ್ರಾಮಕೆ ಕಾವ್ಯಸಿಂಚನವೋ?
ಕಂದರ್ಪನ ಕನ್ನಿಕೆಯರ ಕಥಕ್ಕಲಿಯೋ?

ಕಲ್ಲ ಕನ್ನಿಕೆಯೊಯ್ದಿಹಳು ಕೈವಲ್ಯಕೆ,
ಕಾಣದ, ಕೇಳದ ಕಲ್ಪನೆಯ ಕೇಳಿಗೆ.
ಕಾಲಿಗೆರಗುವೆ ಕೆಚ್ಚು, ಕೈಚಳಕಕೆ,
ಕೈಮುಗಿವೆ ಕೂರ್ಮೆ ಕಾಣಿಕೆಗೆ.

ಕಾಡ ಕಲ್ಲಿನಲಿ ಕ್ಲಿಷ್ಟ ಕಲೆಯು,
ಕೂಗಿ ಕರೆದಿದೆ ಕಟ್ಟೋಲೆಯು.
ಕಬ್ಬಿಗನೆದೆಯ ಕಲ್ಪನೆಯ ಕಥನ,
ಕಲ್ಲ ಕೊಳಲಿನಲಿ ಕಾವ್ಯವಾಚನ!

ಕೊನರು- ಚಿಗುರು
ಕೌಮುದಿ - ಬೆಳದಿಂಗಳು
ಕಮನೀಯ - ಚೆಲುವಾದ
ಕೌಸ್ತುಭ - ವಿಷ್ಣು ತೊಟ್ಟ ರತ್ನ
ಕರಣಗ್ರಾಮ - ಪಂಚೇಂದ್ರಿಯಗಳು
ಕಂದರ್ಪ - ಮನ್ಮಥ
ಕೈವಲ್ಯ - ಮೋಕ್ಷ
ಕೂರ್ಮೆ - ಪ್ರೀತಿ
ಕಟ್ಟೋಲೆ - ಆಜ್ಞಾಪತ್ರ
© ಕೃಷ್ಣಕವಿ
#ಕೃಷ್ಣಕವಿ #ಏಕಾಕ್ಷರ_ಕವನ #ಶಿಲ್ಪಕಲೆ