...

8 views

ಅಕ್ಷರಾರ್ಚನೆ
ಅಜ್ಞಾನವನಳಿಸಿ ಅಮೃತದ ಅರಿವನಿತ್ತ,
ಅಕ್ಷರದೇವಿಗೆ ಅಭಿಜಾತನ ಅಗ್ರಪೂಜೆ!

ಅಂಬೋಧಗಳ ಅಟ್ಟಿ, ಅಂಬುಜಕೆ
ಅಂದಿಸಿದೆ ಅಂಬರಮಣಿಯ ಅಂಶುಗಳ.
ಅಜಾಂಡದಲಿ ಅರಿವು ಅಡರುಗೊಳುವಂತೆ
ಅಣಿಗೊಳಿಸಿದೆ, ಅಭಿಜ್ಞೆಯೇ ಅಭಿನಂದನೆ!

ಅಪರಜ್ಞಾನದ ಅಗ್ನಿಫಲವನು ಅಚ್ಚುಗೈವಲು,
ಅಕ್ಕರದ ಅಕ್ಷತೆಯನಿತ್ತ ಅಧಿದೇವತೆಯೇ,
ಅನ್ನ, ಅರಿವೆ, ಅಗಾರಗಳನಿತ್ತ ಅಮ್ಮನೇ,
ಅಭಿಮಾನದೆ ಅರ್ಪಿಸುವೆ ಅಭಿವಂದನೆ!

ಅಮೃತವನಿತ್ತೆ ಅಸವಳಿದವಗೆ,
ಅಂಧನಿಗಿತ್ತೆ ಅದ್ವಿತೀಯ ಅಕ್ಷಿಗಳ,
ಅತಿಶಯದ, ಅನ್ವರ್ಥದ, ಅಕ್ಷರವನಿತ್ತೆ,
ಅಬ್ಬೆ, ಅರ್ಪಿಸುತಿಹೆ ಅಕ್ಷರಾರ್ಚನೆ!


ಅಭಿಜಾತ - ವಿದ್ಯಾವಂತ
ಅಂಬೋಧ - ಮೋಡ
ಅಂಬುಜ - ಕಮಲ
ಅಂದಿಸು - ಎಟುಕಿಸು
ಅಂಬರಮಣಿ -ಸೂರ್ಯ
ಅಂಶು - ಕಿರಣ
ಅಜಾಂಡ - ವಿಶ್ವ
ಅಡರು - ಹಬ್ಬು
ಅಭಿಜ್ಞೆ - ಚೆನ್ನಾಗಿ ತಿಳಿದವಳು
ಅಪರಜ್ಞಾನ - ಅತ್ಯುತ್ತಮ ಜ್ಞಾನ
ಅಗ್ನಿಫಲ - ವಜ್ರ
ಅಗಾರ - ವಾಸಸ್ಥಾನ
ಅಸವಳಿ - ಬಳಲು
© ಕೃಷ್ಣಕವಿ
#ಕೃಷ್ಣಕವಿ #ಏಕಾಕ್ಷರ_ಕವನ #ಅಕ್ಷರ