...

6 views

ಜೀವ-ಜೀವನದ ಕಠೋರ ಸತ್ಯ

ನೆಲೆ ಇರದ ಕಡೆಯಲ್ಲೂ
ಬಹುಕಾಲ ಇರಬಹುದು
ಸೆಲೆ ಇರದ ಸ್ಥಳದಲ್ಲೂ
ಕೆಲಕಾಲ ಇರಲುಬಹುದು
ಬೆಲೆ ಇರದ ಜಾಗದಲ್ಲಿ
ಕ್ಷಣಕಾಲವೂ ಇರಲಾಗದು

ಕನಸಿರದವರ ಜೊತೆಯೂ
ಬಹು ಘಳಿಗೆ ಇರಬಹುದು
ಮಾತಿರದವರ ಒಡನೆಯೂ
ಕೆಲಘಳಿಗೆ ಇರಲುಬಹುದು
ಮನಸೇ ಇರದವರ ಸಂಗಡ
ಅರೆ ಘಳಿಗೆಯೂ ಇರಲಾಗದು

ಕುದಿವವರ ಎದುರಲ್ಲಿಯು
ಬಹು ಸಮಯ ಇರಬಹುದು
ಕುಹಕವಾಡುವರ ಮುಂದೆಯು
ಕೆಲಸಮಯ ಇರಲುಬಹುದು
ಕರುಬುವವರ ಕಂಗಳೆದುರು
ಸ್ವಲ್ಪ ಸಮಯವೂ ಇರಲಾಗದು

ಕಷ್ಟ ನಷ್ಟಗಳ ನಡುವಲ್ಲಿಯೂ
ಬಹುವೇಳೆ ಇರಬಹುದು
ಇಷ್ಟವಿಲ್ಲದ ಕಡೆಯಲ್ಲಿಯೂ
ಕೆಲ ವೇಳೆ ಇರಲುಬಹುದು
ನಿಕೃಷ್ಟವಾಗಿ ಕಾಣುವೆಡೆಯಲ್ಲಿ
ತುಸುವೇಳೆಯೂ ಇರಲಾಗದು.