...

2 views

ಕಳೆದುಹೋಗಬೇಕು..
ಕಾನನದ ಕೊರಳಲ್ಲಿ
ಹಸಿರು ಹಂದರದಲ್ಲಿ
ಕಳೆದುಹೋಗಬೇಕು ನಾನು
ಮತ್ತೇ ಮರಳಿ ಬಾರದಂತೆ....
ಹಕ್ಕಿಯಾ ಗುಂಪಲ್ಲಿ
ಹಕ್ಕಿಯಂತೆ ಹಾಡಿ
ಅದರ ಹಾಗೇ ಹಾರಿ
ಮರೆಯಾಗಬೇಕು ಮತ್ತೇ ಮರಳದಂತೆ....
ನದಿಯೊಂದಿಗೆ ಹರಿದು
ತೀರ ಕಾಣದಂತೆ ನಡೆದು
ಸೇರಬೇಕು ಸಾಗರವ
ಸಾಗಬೇಕು ಮತ್ತೇ ನೆಲ ತಾಗದಂತೆ....
ಕಳೆದು ಹೋಗಲು ಬಯಸಿ
ಕಾರಿರುಳು ಇಳಿದಾಗ
ಚಂದ್ರಬಂದ ಕಾಂತಿ ತಂದ
ಹೇಗೆ ಕಳೆದುಹೋಗಲಿ....
ಮನವ ಶಿಲೆಯ ಮಾಡಿ
ಒಲವಭಾವಕೆ ಬೀಗಹಾಕಿ
ನಾ ಸಾಗುತಿರುವಾಗ
ಬಂಧವಾವುದು ಬಿಗಿದಂತೆ
ಹೇಗೇ ನಾ ಕಳೆದುಹೋಗಲಿ...
ಮನದ ಆಸೆಗೆ ಕಡಿವಾಣವೆಲ್ಲಿ
ಬಯಸುವುದು ಮನದಿನವು
ನಿನ್ನೆದೆಯ ಆಸರೆಯ
ಮತ್ತೆಲ್ಲಿ ಕಳೆದುಹೋಗಲಿ...
ಆದರೂ ಕಳೆದುಹೋಗಬೇಕು
ಯಾರ ಅಳಲು ತಾಕದಂತೆ
ನೆನಪು ಹಸಿರಾಗಿರುವಂತೆ
ಹಸಿರಲಿ ನನ್ನುಸಿರು ಇರುವಂತೆ
ಕಳೆದುಹೋಗಬೇಕು ಮತ್ತೇ ಮತ್ತೇ ನೆನಪಾಗುವಂತೆ...

.